ಫೈನಾನ್ಷಿಯಲ್ ಟೈಮ್ಸ್
ಲಂಡನ್ ಮತ್ತು ಫ್ರಾಂಕ್‍ಫರ್ಟ್ ನಗರಗಳಿಂದ ಪ್ರಕಟವಾಗುತ್ತಿರುವ ಆರ್ಥಿಕ ಸಮಾಚಾರಗಳಿಗೆ ಮೀಸಲಾದ ಇಂಗ್ಲಿಷ್ ದಿನ ಪತ್ರಿಕೆ. ಬ್ರಿಟನ್ನಿನ ಆರ್ಥಿಕ ನೀತಿಯ ಮೇಲೆ ಪ್ರಭಾವ ಬೀರುವ ಪತ್ರಿಕೆ. 1884ರಲ್ಲಿ ಹ್ಯಾಕನಿ ಹ್ಯಾನ್‍ಸರ್ಡ್ ಎಂಬ ವಾರಪತ್ರಿಕೆ ಪ್ರಾರಂಭಿಸಿ ಪತ್ರಿಕೋದ್ಯಮದಲ್ಲಿ ಅನುಭವ, ಯಶಸ್ಸುಗಳಿಸಿದ್ದ ಬ್ರಿಟಿಷ್ ಸಂಸತ್ತಿನ ಸದಸ್ಯ ಹೊರಾಷಿಯೋ ಬಾಟಮ್ ಲೀ ಈ ಪತ್ರಿಕೆಯನ್ನು 1888ರಲ್ಲಿ ಪ್ರಾರಂಭಿಸಿದರು. ಈ ಪತ್ರಿಕೆಯೊಡನೆ 1884ರಲ್ಲಿ ಪ್ರಾರಂಭವಾಗಿದ್ದ ಫೈನಾನ್ಷಿಯಲ್ ನ್ಯೂಸ್ ವಿಲೀನಗೊಂಡಿತು. ಬಾಟಮ್‍ಲೀ ಮಾಲಿಕತ್ವದಲ್ಲಿ ಸನ್, ಸಂಡೆ ಈವ್‍ನಿಂಗ್ ಟೆಲಿಗ್ರಾಮ್, ಮತ್ತು ಇಲಸ್ಟ್ರೇಟೆಡ್ ಪತ್ರಿಕೆಗಳಿದ್ದುವು. ಜಾನ್ ಬುಲ್ ಪತ್ರಿಕೆಗೆ ಪಾಲುದಾರನಾಗಿದ್ದ ಈತ ಬಹು ಚಾಣಾಕ್ಷನಾಗಿದ್ದು ಕೆಲವೊಂದು ಆರ್ಥಿಕ ಅಪರಾಧಗಳಿಗಾಗಿ ಜೈಲು ಶಿಕ್ಷೆ ಅನುಭವಿಸಿದರು. ಪತ್ರಿಕೆ ಮುಂದೆ ಫೈನಾನ್ಷಿಯಲ್ ಟೈಮ್ಸ್ ಲಿಮಿಟೆಡ್ ಕಂಪನಿಯ ಸ್ವಾಮ್ಯಕ್ಕೆ ಬಂತು. ಈ ಪತ್ರಿಕೆಯ ವಿಶೇಷವೆಂದರೆ ತೆಳುಕಾವಿ ಬಣ್ಣದ ಕಾಗದದ ಮೇಲಿನ ಅಂದವಾದ ಮುದ್ರಣ. ಮುಖಪುಟದ ಮೇಲುಗಡೆ ಒಳಪುಟಗಳ ಮುಖ್ಯವಿಷಯಗಳ ಶೀರ್ಷಿಕೆಯನ್ನು ಚಿತ್ರ ಸಹಿತ ಸಣ್ಣಬ್ಲಾಕುಗಳಲ್ಲಿ ಮುದ್ರಿಸುವುದು, ಆರ್ಥಿಕ ವಿಷಯಗಳನ್ನು ಯುಕ್ತ ರೇಖಾಚಿತ್ರಗಳು, ನಕ್ಷೆಗಳ ಸಹಿತ ಪ್ರಕಟಿಸುವುದು, ಹಿಂದಿನ ಪುಟದಲ್ಲೂ ಪತ್ರಿಕೆಯ ಹೆಸರನ್ನು ಮುಖಪುಟದಲ್ಲಿ ಪ್ರಕಟಿಸುವಂತೆಯೇ ದೊಡ್ಡ ಅಕ್ಷರಗಳಲ್ಲಿ ದಿನಾಂಕ, ತಿಂಗಳು ಮತ್ತು ವರ್ಷ ಸಹಿತ ಮುದ್ರಿಸುವುದು ಇತ್ಯಾದಿ. ಮತ್ತೊಂದು ವಿಶೇಷವೆಂದರೆ ಪತ್ರಿಕಾ ಸಂಪಾದಕರ ಹೆಸರನ್ನೇ ಮುದ್ರಿಸದಿರುವುದು. ಈ ಪತ್ರಿಕೆ ಎಲ್ಲ ದೇಶಗಳ ಆರ್ಥಿಕ ವಿಷಯಗಳ ಕಡೆ ಗಮನ ಹರಿಸುವುದಾದರೂ ಯುನೈಟೆಡ್ ಕಿಂಗ್‍ಡಮ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತದೆ.

ಆಸ್ಟ್ರಿಯ, ಬೆಲ್ಜಿಯಮ್, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್‍ಲೆಂಡ್ಸ್, ನಾರ್ವೆ, ಪೋರ್ಚುಗಲ್, ಸ್ಪೇನ್, ಸ್ವೀಡನ್, ಸ್ವಿಟ್‍ಜರ್ಲೆಂಡ್, ಈರಿ, ಮತ್ತು ಮಾಲ್ಟಾ ದೇಶಗಳಲ್ಲಿ ಇದರ ಪ್ರಸಾರ ಅಧಿಕವಾಗಿದೆ. ಅಲ್ಲೆಲ್ಲ ಇದರ ಬೆಲೆಯನ್ನು ಆಯಾ ದೇಶದ ನಾಣ್ಯಗಳಲ್ಲಿ ಇಷ್ಟೆಂದು ಮುಖಪುಟದಲ್ಲಿ ಪ್ರಕಟಿಸಿದೆ. ಪತ್ರಿಕೆ ಫೈನಾನ್ಷಿಯಲ್ ಟೈಮ್ಸ್ ಲಿಮಿಟೆಡ್ ಕಂಪನಿಗೆ ಸೇರಿದ್ದು ಪಿಯರ್‍ಸನ್ ಲಾಂಗ್‍ಮನ್ ಲಿಮಿಟೆಡ್ ಅವರ ನಿಯಂತ್ರಣದಲ್ಲಿದೆ.	ಆರ್ಥಿಕ ವಿಚಾರಕ್ಕೆ ಸಂಬಂಧಪಟ್ಟ ಪತ್ರಿಕೆಗಳಲ್ಲಿ ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿರುವುದು ಅಮೆರಿಕದ ವಾಲ್ ಫ್ರೀಟ್ ಜಾರ್ನರ್ ಎರಡನೇ ಸ್ಥಾನ `ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಯದು.	
				(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ